ಅನ್ಯಜನರು (ಯೆಹೂದ್ಯರಲ್ಲದವರು)

ಯೆಹೂದ್ಯರಲ್ಲದವರು (ಅನ್ಯಜನರು) ಎಂಬ ಪದ ಲ್ಯಾಟಿನ್ ಭಾಷೆಯ “ಜನರು” ಎಂದು ಅರ್ಥಕೊಡುವ ಪದದಿಂದ ಬಂದಿದೆ. ಸತ್ಯವೇದದ ಪ್ರಕಾರ ಯೆಹೂದ್ಯರಲ್ಲದವರೆಲ್ಲರೂ ಅನ್ಯಜನರು. ನೋಹ ಮತ್ತು ಅವನ ವಂಶಸ್ಥರು ಭೂಮಿಯ ಮೇಲೆ ಹರಡಿಕೊಂಡು ಬೇರೆ ಬೇರೆ ಜನರು ಅಥವಾ ಜನಾಂಗಗಳಾದರು (ಆದಿಕಾಂಡ 10). ಅವರು ದೇವರಿಗೆ ವಿರೋಧವಾಗಿ ನಡೆದುಕೊಂಡದ್ದರಿಂದ ದೇವರು ಅವರಲ್ಲಿ ಭಾಷಾಬೇಧವುಂಟುಮಾಡಿ ಅವರನ್ನು ಭೂಮಿಯ ಮೇಲೆಲ್ಲಾ ಚದರಿಸಿದನು (ಆದಿಕಾಂಡ 11). ತರುವಾಯ ದೇವರು ಅಬ್ರಹಾಮನನ್ನೂ ಸಾರಳನ್ನೂ ಆರಿಸಿಕೊಂಡು, ಅವರ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದ ಉಂಟಾಗುವುದು ಎಂದು ಹೇಳಿದನು (ಆದಿಕಾಂಡ 12:1-3). ಮುಂದೆ ಇಸ್ರಾಯೇಲ್ಯರ ಅರಸನಾದ ಸೊಲೊಮೋನನು ಲೋಕದ ಎಲ್ಲಾ ಜನರು ದೇವರಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ ಇತರ ಜನಾಂಗಗಳ ಕಡೆಗೆ ಸಹನೆ, ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಜನರನ್ನು ಪ್ರೇರೇಪಿಸಿದನು (೧ ಅರಸುಗಳು 8:41-43). ಇತರ ಜನಾಂಗಗಳವರು ತನ್ನನ್ನು ಗೌರವಿಸಬೇಕೆಂದು ದೇವರು ಆತುರವುಳ್ಳವನಾಗಿರುವನೆಂದೂ (ಯೆರೆಮೀಯನು 4:2) ಮತ್ತು ಅವರು ಇಸ್ರಾಯೇಲ್ ದೇವರನ್ನು ಅರಿತುಕೊಳ್ಳಲು ಇಚ್ಚಿಸುವರೆಂದೂ (ಯೆಶಾಯನು 42:1-4; 51:4,5) ದೇವರ ಜನರು ವಿಧೇಯರಾಗಿದ್ದರೆ, ಪ್ರಪಂಚದ ಎಲ್ಲಾ ಜನಾಂಗಗಳಿಗೆ ಅವರು ಮಾದರಿಯಾಗಿಯೂ ಸಾಕ್ಷಿಯಾಗಿಯೂ ಇರುವರೆಂದೂ (ಯೆಶಾಯನು 6:1) ಇಸ್ರಾಯೇಲ್‌ ಪ್ರವಾದಿಗಳು ಜನರಿಗೆ ತಿಳಿಸುತ್ತಾ ಬಂದರು. ಇಸ್ರಾಯೇಲ್ಯರ ಶತ್ರುಗಳಾಗಿದ್ದ ಒಂದು ಜನಾಂಗಕ್ಕೆ ದೇವರು ಹೇಗೆ ಕರುಣೆ ತೋರಿಸಿದನೆಂಬುದನ್ನು ಯೋನನ ಚರಿತ್ರೆಯು ತಿಳಿಸುತ್ತದೆ. ಒಂದು ದಿನ ದೇವರು ಎಲ್ಲಾ ಜನಾಂಗಗಳ ಮೇಲೆ ಒಬ್ಬನೇ ಪ್ರಭುತ್ವ ನಡೆಸುವನು ಮತ್ತು ದೇವರನ್ನು ಗೌರವಿಸಲು ಅವರೆಲ್ಲರೂ ಒಟ್ಟಾಗಿ ಸೇರುವರು (ಕೀರ್ತನೆಗಳು 47:8,9; 86:8,9).

ದೇವರು ಸ್ಥಾಪಿಸುವ ರಾಜ್ಯದಲ್ಲಿ“ಸಕಲಜನಾಂಗ ಕುಲಭಾಷೆಗಳವರು ಆತನನ್ನು ಸೇವಿಸುವರು” (ದಾನಿಯೇಲನು 7:14).

ಹೊಸ ಒಡಂಬಡಿಕೆಯಲ್ಲಿ ಸಿಮಯೋನನು ಶಿಶುವಾದ ಯೇಸುವನ್ನು ಕುರಿತು ಆತನು ಅನ್ಯದೇಶದವರಿಗೆ ಜ್ಞಾನೋದಯದ ಬೆಳಕು ಎಂದು ಕೊಂಡಾಡಿದ್ದಾನೆ (ಲೂಕನು 2:29-32). ಯೇಸು ಗ್ರೀಕರ ಪಟ್ಟಣವಾದ ಗೆರಸೇನದಲ್ಲಿ ದೆವ್ವಹಿಡಿದವನನ್ನು ಸ್ವಸಮಾಡಿ (ಮಾರ್ಕನು 5), ತೂರ್ ಸೀನ್ ಪ್ರಾಂತ್ಯಗಳಲ್ಲಿ ಕಿವುಡನನ್ನು ಗುಣಪಡಿಸಿ (ಮಾರ್ಕನು 7:31-37), ರೋಮಾಯ ಶತಾಧಿಪತಿಯ ಆಳನ್ನು ಸ್ವಸ್ಥ ಮಾಡುವುದರ (ಮತ್ತಾಯನು 85-13) ಮೂಲಕ ಯೆಹೂದ್ಯರಲ್ಲದವರ ಕಡೆಗೂ ತನ್ನ ಸಹಾಯ ಹಸ್ತವನ್ನು ಚಾಚಿದ್ದಾನೆ. ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಅಪೊಸ್ತಲರು ನಿರ್ಣಯಿಸಿದರು (ಅ. ಕೃ. 10:35), ದೇವರು ಯೇಸು ಕ್ರಿಸ್ತನ ಮೂಲಕ ಮಾಡಿದ್ದನ್ನು ನಂಬುವ ಯೆಹೂದ್ಯರು ಮತ್ತು ಯೆಹೂದ್ಯರಲ್ಲದವರು ಇಬ್ಬರೂ ದೇವರ ನೂತನ ಸೃಷ್ಟಿಯಲ್ಲಿ ಅಂಗೀಕರಿಸಲ್ಪಡುವರು ಎಂದು ಪೌಲನು ಹೇಳಿದ್ದಾನೆ (ಗಲಾತ್ಯದವರಿಗೆ 2:11-16). ಪ್ರಕಟನೆ ಗ್ರಂಥದ ಗ್ರಂಥಕರ್ತನು ಯೇಸು ಇಡೀ ಮಾನವಕುಲದ ಪಾಪಗಳಿಗಾಗಿ ಪ್ರಾಣಕೊಟ್ಟು ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರು ದೇವರ ರಾಜ್ಯದಲ್ಲಿ ಭಾಗಿಗಳಾಗಲು ಸಾಧ್ಯವಾಗುವಂತೆ ಮಾಡಿದ್ದಾನೆಂದು ಪ್ರಸಿದ್ಧಿಪಡಿಸಿದ್ದಾನೆ (ಪ್ರಕಟನೆ 5:6-10). ಹಿಂದೆ ಇಸ್ರಾಯೇಲಿನ ಯಾಜಕರು ಮಾತ್ರವೇ ಪಡೆಯಬಹುದಾಗಿದ್ದ ವಿಶೇಷಾಧಿಕಾರದಲ್ಲಿ ಇತರರೂ ಭಾಗಿಗಳಾಗಬಹುದು – ಅವರು ದೇವರ ಸಾನ್ನಿಧ್ಯವನ್ನು ಪ್ರವೇಶಿಸಬಹುದು. 

Spread the love
Tags: ,

Pastor. Salomon

Pastor. Salomon

Leave a Reply

Your email address will not be published. Required fields are marked *

Top
%d bloggers like this: